Thursday, 15 December 2011

ಮೊದಲ ಹೆಜ್ಜೆ...

ಕೆಲವು ಗೆಳೆಯರು ಹೇಳ್ತಾ ಇದ್ರು ~ ಚೆನ್ನಾಗಿ ಬರೀತೀಯಾ , 
ಯಾಕೆ ಒಂದು ಬ್ಲಾಗ್ ಶುರು ಮಾಡಬಾರದು ಅಂತ...
ಸರಿ ~ ನಾನೂ ವಿಚಾರ ಮಾಡಿದೆ... ಬ್ಲಾಗಲ್ಲಿ ಏನು ಬರೀಬೇಕು ?!?
ಬ್ಲಾಗಲ್ಲಿ ಜನರನ್ನು ಮೆಚ್ಚಿಸೋದು ಮಾತ್ರ ಬರೀಬೇಕಾ ಅಥವಾ
ನಮಗೆ ಅನ್ನಿಸಿದ್ದನ್ನೆಲ್ಲಾ ಬರೀಬಹುದಾ ಅನ್ನೋದು ಮೊದಲ ಪ್ರಶ್ನೆ...
ಯಾಕೋ ಎರಡನೆಯದೇ ಮನಸಿಗೆ ಹಿತ ಅನ್ನಿಸಿದರೂ...
ಮನಸಿನ ಮಾತುಗಳಿಗೆ ಜಾಹೀರಾತು ಬೇಕೇ ಅನ್ನಿಸಿದ್ದೂ ಅಷ್ಟೇ ಸತ್ಯ !
 
ಏನೆಂದರೂ ಬರವಣಿಗೆ ಮನಸಿಗೆ ಹಿತವೆನಿಸುತ್ತದೆ ~
ಅದು ಅಂತರಾಳದ ಭಾವನೆಗಳಿಗೊಂದು ವೇದಿಕೆ ಒದಗಿಸುತ್ತದೆ...
ಎಷ್ಟೋ ಸಲ ಮಾತಿನಲ್ಲಿ ವ್ಯಕ್ತಪಡಿಸಲಾಗದ ಸ್ಪಂದನೆಗಳನ್ನು
ನಾವು ಬರವಣಿಗೆಯ ಮೂಲಕ ಹರಿಯಬಿಡುತ್ತೇವೆ...
ಮಾತಾಡುವಾಗ ಯಾರು ಏನೆಂದುಕೊಳ್ಳುತ್ತಾರೋ ಎಂದು
ಭಯಪಡುವ ನಾವು ಬರೆಯುವಾಗ ಎಲ್ಲ ಭಿಡೆಗಳನ್ನು
ಬದಿಗಿಟ್ಟು ಮನಸ್ಸಿಗೆ ಬಂದಿದ್ದನ್ನೆಲ್ಲ ಅಕ್ಷರಗಳಾಗಿ ಹರಿಯಬಿಡುತ್ತೀವೆ !
ಆ ಕಾರಣಕ್ಕೇ ಬರವಣಿಗೆಯ ಮೂಲಕ ನಮ್ಮನ್ನು ನಾವು
ಕಂಡುಕೊಳ್ಳೋದು ಸುಲಭವಾಗುತ್ತೆ ಅಷ್ಟೇ !
 
ಯಾರೋ ಇಷ್ಟ ಪಟ್ಟು ಓದುವಂಥ ಬರಹಗಾರ
ಖಂಡಿತ ನಾನಲ್ಲ, ಆದರೆ ಅಪ್ಪಟ ಕನ್ನಡ ಪ್ರೇಮಿ:-)
ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು, ಕನ್ನಡಿಗರನ್ನು 
ಅತ್ಯಂತ ಪ್ರೀತಿಸಿಕೊಂಡು ಬೆಳೆದವನು...
 
ಏನೋ ಮನಸಿಗೆ ಅನ್ನಿಸದ್ದನ್ನೆಲ್ಲಾ ಇಲ್ಲಿ ಗೀಚುತ್ತೀನೆ...
ಯಾರೋ ಓದುತ್ತಾರೆ ಅಂತಲ್ಲ, ನನ್ನ ಅನಿಸಿಕೆಗಳನ್ನು
ಮುಕ್ತವಾಗಿ ಹರಿಯಬಿಡುವುದಕ್ಕೆ ಮಾತ್ರ ಈ ನನ್ನ ಬ್ಲಾಗು...
 
ಇಷ್ಟವಾದರೂ, ಕಷ್ಟವಾದರೂ ನೀವು ಕೂಡ
ನಿಮಗನ್ನಿಸಿದ್ದನ್ನು ಅಭಿವ್ಯಕ್ತಿಪಡಿಸಿಬಿಡಿ...
 
ಇಲ್ಲಿ ಎಲ್ಲರ ಅಭಿಪ್ರಾಯಗಳಿಗೂ ಸ್ವಾಗತ, ಸ್ವೀಕೃತ !

ಪ್ರೇಮ-ವಾಣಿ(!)

ಎಲ್ಲಿ ಸಾಗಿದರಲ್ಲಿ ಕಾಡುವಳು ನನ್ನವಳು,
ನನ್ನ ಬಿಟ್ಟು ನೀನೆಲ್ಲಿ ಎಂದು ಕೆಣಕುವಳು...
ಎತ್ತ ನೋಡಿದರಲ್ಲಿ ಅವಳದೇ ಧ್ವನಿ...
ದೂರ-ವಾಣಿ, ಚಲನ-ವಾಣಿ,
ಆಕಾಶ-ವಾಣಿ, ಅಶರೀರ-ವಾಣಿ...
ಕೊನೆಯಲ್ಲಿ ಉಳಿಯುವುದೊಂದೇ ಪ್ರಶ್ನೆ ~
ಆಗುವಳೇ ನನ್ನ ಪ್ರೀತಿಯ ಖನಿ
ಈ ಪಿಸುಮಾತಿನ ಪ್ರೇಮ(!) ವಾಣಿ ?

Wednesday, 23 November 2011

ನಿಟ್ಟುಸಿರು...

ಗೆಳತೀ ನನ್ನ ಹೃದಯದಂಗಳವಿದು,
ಆಟದ ಮೈದಾನವಲ್ಲ ...
ನೀನು ಬೇಕೆಂದಾಗಲೆಲ್ಲ 
ಬರೋಕೆ ಹೋಗೋಕೆ  ...  
ಪ್ರೀತಿಯಿದು ಹುಡುಗಾಟವಲ್ಲ
ನೀ ಹೇಳಿದಷ್ಟೇ
ಸುಲಭವಾಗಿ ಮರೆಯೋಕೆ ...

Tuesday, 22 November 2011

ನಾಚಿಕೆ...

ಗೆಳತೀ, ಅದೇಕೆ ನೋಡುವದು
ನೀನು ಮರೆಯಲ್ಲಿ ಕದ್ದು ?
ಹೇಳಿದರೆ ನಾನೇ ಬರುತ್ತಿದ್ದೆನಲ್ಲಾ
ನಿನ್ನೆದುರಿಗೆ ಖುದ್ದು...

ಅವಳಿಲ್ಲದೇ...

ಕಣ್ಣಂಚಿನಿಂದ ಜಾರಿದ ಹನಿ ಹೆಕ್ಕಿ ಕೇಳಿದೆ,
'ನೀನೇಕೆ ಜಾರಿದೆ ಮುತ್ತು ?'
ಅದು ಬಿಸುಪಾಗಿ ಅಂತು ~
'ನಿನ್ನ ಕಣ್ಣಾಲಿಯೆಲ್ಲಾ ಅವಳೇ ತುಂಬಿ 
ನನಗೆಲ್ಲಿ ಜಾಗವಿತ್ತು ?'