Thursday 24 May 2012

ಬಿಸುಲ್ಗುದುರೆಯ ಬೆನ್ನೇರಿ...

ಹಣ ಹಣ ಹಣ...
 
ಹಣ ಎಂದರೆ ಹೆಣವೂ ಬಾಯಿ ಬಿಡುವ ಕಾಲ ಅಂತೆ ಇದು !
ನಾವೆಲ್ಲಾ ಹಣ ಎಂಬ ಬಿಸುಲ್ಗುದುರೆಯ ಬೆನ್ನ ಹಿಂದೆ ಬಿದ್ದು ಸ್ವಂತಿಕೆಯನ್ನು 
ಕಳೆದುಕೊಳ್ಳುತ್ತಿದ್ದೆವೇನೋ ಅನಿಸುತ್ತೆ...
ಒಂದು ಸಲ ಯೋಚಿಸಿ ನೋಡಿ, ಇಂದಿನ ನಮ್ಮ ಯೋಚನೆಗಳು 'ಹಣ'ದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ.
ಯಾವ ಕಂಪನಿಯಲ್ಲಿ ಹೆಚ್ಚು ಸಂಬಳ ದೊರೆಯುತ್ತೋ ಅಂತ ಹುಡುಕುತ್ತೇವೆ... ಇಲ್ಲಿಂದ ಅಲ್ಲಿಗೆ ಹಾರುತ್ತೇವೆ.
ಅಲ್ಲಿ ಗಳಿಸಿದ ಹಣವನ್ನು ಎಲ್ಲಿ ತೊಡಗಿಸಿದರೆ ಹೆಚ್ಚು ಆದಾಯ ಎಂದು ಲೆಕ್ಕ ಹಾಕುತ್ತಾ ಕೂರುತ್ತೇವೆ. ಅಲ್ಲಿ-ಇಲ್ಲಿ ನಿವೇಶನ
ಹುಡುಕುತ್ತೇವೆ. ನಿವೇಶನ ಕೊಳ್ಳುತ್ತ-ಮಾರುತ್ತ ದುಡ್ಡು ಮಾಡುತ್ತೇವೆ. ಯಾವ ಶೇರು ಕೊಂಡರೆ ಹೆಚ್ಚು ಲಾಭ ಎಂದು ಯೋಚಿಸುತ್ತೇವೆ.
ಮಕ್ಕಳಿಗೆ ಏನು ಓದಿದರೆ, ಯಾವ ಉದ್ಯೋಗ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂಬ ತರಬೇತಿ ನೀಡುತ್ತೇವೆ.
ನಮ್ಮ ಪ್ರತಿ ಆಲೋಚನೆಯೂ ಹಣದ ಲೆಕ್ಕಾಚಾರ ಹಾಕುತ್ತವೆ. ಲೆಕ್ಕಾಚಾರ ಮಾಡುತ್ತಾ ಬದುಕು ಯಾಂತ್ರಿಕವಾಗುತ್ತೆ.
 
ಏನಾಗಿದೆ ನಮಗೆ ? ಒಂದು ಹತ್ತು-ಹದಿನೈದು ವರುಷ ಹಿಂದಕ್ಕೆ ತಿರುಗಿ ನೋಡಿ. ಅದು ಇಂದಿಗಿಂತ ಸುಂದರವಾಗಿತ್ತು ಎನಿಸದಿದ್ದರೆ ಹೇಳಿ...
ಅವತ್ತು ಜೇಬಲ್ಲಿ ಇಂದಿನಷ್ಟು ಹಣ ಇರಲಿಲ್ಲ, ಅದು ಬೇಕು ಅಂತಲೂ ಹೆಚ್ಚು ಅನಿಸುತ್ತಿರಲಿಲ್ಲ. ಆಗ ಹೆಚ್ಚು ನೆಮ್ಮದಿಯಿಂದ ಇದ್ದೆವು.
ಆಗ ಗೆಳೆಯರಿದ್ದರು, ಅರ್ಥವೇ ಇಲ್ಲದ ಅನರ್ಥ ನಗೆ-ಹರಟೆಗಳಿದ್ದವು. ಈಗ ಎಲ್ಲವೂ 'ಅರ್ಥ' ವ್ಯವಸ್ಥೆಯೇ ! ಮಗ ಯಾವುದೋ ಕಾದಂಬರಿ
ಓದುತ್ತಿದ್ದರೆ, ಮಗಳು ಯಾವುದೋ ಭಾವಗೀತೆ ಕೇಳುತ್ತಿದ್ದರೆ, ಮೂರು ಕಾಸಿಗೂ ಬೆಲೆ ಇಲ್ಲದ ಕೆಲಸ ಎಂದು ಮೂಗೆಳೆಯುತ್ತೇವೆ.
ಪೇಟೆಯ ಗೆಳೆಯರು ಕೊಡುವ ಕಣ್ಣು ಕುಕ್ಕುವ ಉಡುಗೊರೆಗಳ ಎದುರು ಹಳ್ಳಿಯ ಸಂಬಂಧಿಗಳು ಮನೆಗೆ ಬರುವಾಗ ಜೊತೆಯಲ್ಲಿ ತರುವ
ಹಣ್ಣು-ತರಕಾರಿಗಳು, ಪಾರ್ಲೆ-ಜಿ ಬಿಸ್ಕತ್ತು ನಮ್ಮ ಮುಖ ಅರಳಿಸುವದಿಲ್ಲ! ಪ್ರೀತಿಯ ಮಾತುಕತೆಗಳು, ಕುಶಲೋಪರಿಗಳು ಕಾಲಹರಣ
ಎನ್ನಿಸುತ್ತವೆ.
 
ನಿಜ, ಇಂದಿನ ಬದಲಾದ ಕಾಲಕ್ಕೆ ನಾವೂ ಹೊಂದಿಕೊಳ್ಳಬೇಕು. ಹಣ ಕೈಲಿಲ್ಲದಿದ್ದರೆ ಕೈ ಕಾಲು ಓಡದ ಹಾಗೆ ಮಾಡಿಬಿಟ್ಟಿದೆ ಇಂದಿನ ಜಾಗತೀಕರಣ!
ಹಣ ಗಳಿಕೆಯೇ ಜೀವನದ ಅತಿ ಮುಖ್ಯ ಗುರಿ ಎಂದುಕೊಂಡು ಮಾನವೀಯತೆಯನ್ನು ಮರೆಯುವತ್ತ ಹೊರಟಿದೆ ಇಂದಿನ ಪ್ರಪಂಚ.
ಈವತ್ತು ನಮ್ಮ ಶಾಲೆ-ಕಾಲೇಜುಗಳೂ ಮಕ್ಕಳಿಗೆ ಅದನ್ನೇ ಬೋಧಿಸುತ್ತವೆ. Annual Package ನ ಆಸೆ ತೋರಿಸಿ ಅವರ ಸ್ವಂತಿಕೆಯನ್ನು
ಕಿತ್ತುಕೊಳ್ಳುವ ಯತ್ನ ಮಾಡುತ್ತಿವೆ. ಹಣದ ಮೋಹಕ್ಕೆ ಮನ ಸೋಲದವರಾರು ? ಜೀವನದ ಕೊನೆಯಲ್ಲಿ ಹಣ ಕೇವಲ ಒಂದು ಬಿಸುಲ್ಗುದುರೆ ಎಂದು
ಜ್ಞಾನೋದಯ ಆಗುವ ಮುನ್ನವೇ ನಾವು ಎಚ್ಚೆತ್ತುಕೊಂಡರೆ ಚೆನ್ನ. ಅಲ್ಲವೇ ???