Sunday 1 January 2017

ದೇಶಪ್ರೇಮದ ವಿಭಿನ್ನ ಪರಿಕಲ್ಪನೆ !

ದೇಶಪ್ರೇಮ ಅನ್ನೋದು ಕೇವಲ ಭಾವನೆಯಲ್ಲ, ಕೇವಲ ದೇಶದ ಜನರ ಅಭಿವೃದ್ಧಿ, ಏಳಿಗೆ ಬಯಸುವುದೊಂದೇ ಅಲ್ಲ. ದೇಶದ ಸನಾತನ ಸಂಸ್ಕೃತಿಗೊಂದು ಅರ್ಥ ಸಿಗುವ ಹಾಗೆ ಬದುಕಿ ತೋರಿಸುವುದು.

ಸಂಸ್ಕೃತಿ ಅಂದರೆ ನಾವು ಉಡುವ ವಸ್ತ್ರಗಳಲ್ಲ, ಆಚರಿಸೋ ಹಬ್ಬಗಳಲ್ಲ, ಪೂಜಿಸೋ ದೇವರುಗಳಲ್ಲ...
ಸಂಸ್ಕೃತಿ ಎಂದರೆ ನಮ್ಮ ದೈನಂದಿನ ನಡವಳಿಕೆ... ನಾವು ಬೇರೆ ವ್ಯಕ್ತಿಗಳೊಂದಿಗೆ, ಪ್ರಾಣಿ-ಪಕ್ಷಿಗಳೊಂದಿಗೆ, ನಮಗೆ ಉಸಿರು ಕೊಟ್ಟ ಪರಿಸರದೊಂದಿಗೆ ನಾವು ನಡೆದುಕೊಳ್ಳುವ ರೀತಿ!

ರಾಷ್ಟ್ರಪ್ರೇಮ ಎಂಬುದು ದೇಶದ ಪ್ರತಿಯೊಂದು ಭಾಷೆ, ಭಾವನೆ, ವಿವಿಧತೆಯಲ್ಲಿನ ಏಕತೆಯ ಜೊತೆಯಲ್ಲಿ ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಂಡು ಹೋಗುವುದೂ ಆಗಿದೆ. ನಮ್ಮ ಪಶ್ಚಿಮ ಘಟ್ಟಗಳು ನಾಶವಾದಲ್ಲಿ, ದೇಶದ ಭೌಗೋಳಿಕ ಸಮತೋಲನವೇ ಏರುಪೇರಾದಲ್ಲಿ, ಮಳೆ ಕಡಿಮೆಯಾಗಿ ಧಗೆ ಹೆಚ್ಚಾಗಿ ಕುಡಿಯುವ ನೀರಿಗೆ ಹಾಹಾಕಾರವಾದಲ್ಲಿ, ತಿನ್ನುವ ಅನ್ನಕ್ಕೂ ವಿದೇಶವನ್ನೇ ನೆಚ್ಚಿಕೊಳ್ಳುವಂತಾದಲ್ಲಿ ಯಾವ ಅಭಿವೃದ್ಧಿ ? ಎಲ್ಲಿಯ ಏಳಿಗೆ ?

ಹಿಂದಿನ ದಿನಗಳನ್ನು ನಾನು ಪ್ರಶ್ನಿಸುವುದಿಲ್ಲ. ನಮ್ಮ ಮುಂದಿನ ಪೀಳಿಗೆ ಒಳಿತನ್ನು ಕಾಣಬೇಕಿದ್ದರೆ ನಾವು ಮೊದಲು ಬದಲಾಗಬೇಕಿದೆ. ಅಂಕಗಳಿಕೆ-ಉದ್ಯೋಗ-ಹಣ-ಒಡವೆ-ಐ-ಫೋನು-ಸೈಟು-ಮನೆ-ಕಾರು ಮೊದಲಾದ ಸ್ವಾರ್ಥಗಳಿಂದಾಚೆ ನಮ್ಮ ಮಕ್ಕಳಿಗೆ ಪಾಲಕರು ಹಾಗೂ ಶಾಲಾ ಕಾಲೇಜುಗಳು ಮೌಲ್ಯಯುತ ಶಿಕ್ಷಣ ನೀಡುವ ಅನಿವಾರ್ಯತೆಯಿದೆ .

ನಮ್ಮ ಮಕ್ಕಳಿಗೆ ಪರಿಸರದೊಳಗಿನ ದೈವತ್ವನ್ನು ಮನವರಿಕೆ ಮಾಡಿಕೊಡಬೇಕಿದೆ. ಪ್ರಕೃತಿ ಕೋಪಗೊಂಡಲ್ಲಿ ಮನುಷ್ಯನ ಯಾವ ಪೂಜೆ-ಪುನಸ್ಕಾರ, ಯಾವ ವಿಜ್ಞಾನ-ತಂತ್ರಜ್ಞಾನಗಳೂ ಕೈ ಹಿಡಿಯಲಾರವು ಎಂಬ ಪರಮಸತ್ಯವನ್ನು ಮನಗಾಣಬೇಕಿದೆ.

ನಮ್ಮ ರಾಷ್ಟ್ರಪ್ರೇಮ ಕೇವಲ ಕ್ರಿಕೆಟ್ ವಿಶ್ವಕಪ್ ಗಳಿಗೆ, ಒಲಿಂಪಿಕ್ ಪದಕಗಳಿಗೆ, ಮೋದಿಯ ಭಾಷಣ ಆಲಿಸುವಿಕೆಗೆ, ಹಿಂದುತ್ವವಾದಕ್ಕೆ ಸೀಮಿತವಾಗದಿರಲಿ.

No comments:

Post a Comment