ನಾಲ್ಕೈದು ವರ್ಷಗಳ ಹಿಂದಿನ ಮಾತು - ಅದೊಂದು ದಿನ ರಾತ್ರಿ ಸುಮಾರು ಹತ್ತೂವರೆ ಗಂಟೆ ಆಗಿರಬಹುದು... ನಾನು ನನ್ನ ಗೆಳೆಯರನ್ನು ಭೇಟಿಯಾಗಿ ರೂಮಿಗೆ ಮರಳುವ ಧಾವಂತದಲ್ಲಿದ್ದೆ. ಬನಶಂಕರಿ ಬಸ್ ನಿಲ್ದಾಣದಲ್ಲಿಳಿದು ಬೇರೊಂದು ಬಸ್ ಗೆ ಕಾಯುತ್ತ ನಿಂತಿದ್ದೆ. ಜನಸಂದಣಿ ನಿಧಾನಕ್ಕೆ ಕಮ್ಮಿ ಆಗುತ್ತಲಿತ್ತು. ಆಗ ಅಲ್ಲಿ ಕಂಡ ಒಂದು ದೃಶ್ಯ ಮನಸ್ಸನ್ನು ತೀವ್ರವಾಗಿ ಕಲಕಿತು. ಪೋಲಿಸ್ ಪೇದೆಯೊಬ್ಬ ದಿನದ ಮಾಮೂಲು ಕೊಡಲಿಲ್ಲವೆನ್ನುವ ಕಾರಣಕ್ಕೆ ತಳ್ಳುಗಾಡಿಯಲ್ಲಿ ಕಲ್ಲಂಗಡಿ ಮಾರುತ್ತಿದ್ದ ಬಡ ಮಧ್ಯ ವಯಸ್ಕ ವ್ಯಾಪಾರಿಗೆ ಮನಬಂದಂತೆ ಚಚ್ಚುತ್ತಿದ್ದ, ಬೂಟು ಕಾಲಲ್ಲಿ ಒಡೆಯುತ್ತಿದ್ದ. ಆ ವ್ಯಾಪಾರಿ ಈ ದಿನದ ವ್ಯಾಪಾರ ಚೆನ್ನಾಗಿ ಆಗಲಿಲ್ಲವೆಂದು ಪರಿ ಪರಿ ಅಂಗಲಾಚಿಕೊಳ್ಳುತ್ತಿದ್ದರೂ ಪೋಲೀಸು ದರ್ಪ ಹೊತ್ತಿ ಉರಿಯುತ್ತಿತ್ತು. ಆಗಲೇ ವ್ಯಾಪಾರಿಯ ಕಿಸೆಗೆ ಕೈ ಹಾಕಿ ಸಿಕ್ಕಷ್ಟೂ ಹಣವನ್ನು ಕಿತ್ತುಕೊಂಡಿದ್ದ ಅವನು ಅಷ್ಟು ಸಾಲದೇ ಆ ತಳ್ಳುಗಾಡಿಯಿಂದ ನಾಲ್ಕಾರು ಕಲ್ಲಂಗಡಿ ಎತ್ತೆತ್ತಿ ರಸ್ತೆಗೆಸೆದು ಒಡೆದು ಹಾಕಿದ್ದ. ಆ ಬಡ ವ್ಯಾಪಾರಿ ಸಂಕಟದಿಂದ ಗೋಳೋ ಎಂದು ಅಳತೊಡಗಿದಾಗ, ಅಷ್ಟು ಹೊತ್ತು ಸುಮ್ಮನೇ ನೋಡುತ್ತಿದ್ದ ನನಗೆ ತಡೆಯಲಾಗಲಿಲ್ಲ. ಮಧ್ಯೆ ಪ್ರವೇಶಿಸಿ ಆ ಪೋಲೀಸನನ್ನು ಸಮಾಧಾನಿಸಿ ಆಚೆ ಕಲಿಸಲು ಯತ್ನಿಸಿದಾಗ ಆತ "ಈ ನನ್ ಮಕ್ಳು ರಸ್ತೇಲೆಲ್ಲ ಗಾಡೀನ ತಳ್ಳ್ ಕೊಂದು ಬಂದು ಟ್ರಾಫಿಕ್ ಜಾಮ್ ಮಾಡಿಬಿಡ್ತಾರೆ" ಅಂತ ಏನೇನೋ ಅಸಂಬದ್ಧ ಬೈದುಕೊಳ್ಳುತ್ತಾ ಆಚೆ ಹೋದ. ಇತ್ತ ಆ ವ್ಯಾಪಾರಿ ರಸ್ತೆಯಲ್ಲಿ ಬಿದ್ದು ಚೆಲ್ಲಾಪಿಲ್ಲಿಯಾಗಿದ್ದ ಹಣ್ಣುಗಳನ್ನು ನೋಡಿ ಸಂಕಟಪಟ್ಟು ಕೊಳ್ಳುತ್ತಾ, ಆ ಪೋಲೀಸಪ್ಪನಿಗೆ ಹಿಡಿ ಶಾಪ ಹಾಕುತ್ತ ತಳ್ಳುಗಾಡಿಯನ್ನು ಪಕ್ಕಕ್ಕೆ ತೆಗೆದುಕೊಂಡು ಅರ್ಧ ಒಡೆದಿದ್ದ ಉಪಯೋಗಿಸಬಹುದಾದ ಹಣ್ಣುಗಳನ್ನು ಗಾಡಿಗೆ ತುಂಬುತ್ತ ಕಣ್ಣೀರು ಹಾಕುತ್ತಿದ್ದ. ಯಾಕೋ ತುಂಬಾ ಬೇಸರವಾಯಿತು ಅವನ ಪರಿಸ್ಥಿತಿ ನೆನೆದು - ಪಾಪ ! ಪ್ರಾಮಾಣಿಕವಾಗಿ ದುಡಿದು ತಿನ್ನುವ ಆ ವ್ಯಕ್ತಿಗೆ ಬೆಳಿಗ್ಗೆಯಿಂದ ವ್ಯಾಪಾರ ಸರಿಯಾಗದ ಚಿಂತೆಯ ಜೊತೆಗೆ ದುಡಿದ ಹಣವನ್ನೂ ಪೋಲೀಸಪ್ಪನಿಗೆ ಕೊಟ್ಟು ಹಣ್ಣುಗಳೂ ರಸ್ತೆ ಪಾಲಾದದ್ದು ನೋಡಿ ಹೊಟ್ಟೆಯಲ್ಲಿ ಅದೆಷ್ಟು ಸಂಕಟವಾಗಿರಬೇಡ ! ಮನೆಯಲ್ಲಿ ಏನು ಕಷ್ಟವೋ, ಅವನ ಮುಖದಲ್ಲಿ ದುಗುಡ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬೆಂಗಳೂರಿನ ಜನಜಾತ್ರೆಯಲ್ಲಿ ಯಾರ ಸಹಾಯಕ್ಕೂ ಹೋಗದೇ, ನಾನು ಮೋಸ ಹೋಗದಿದ್ದರೆ ಸಾಕು ಅಂದುಕೊಂಡು ನನ್ನ ಪಾಡಿಗೆ ಬದುಕುತ್ತಿದ್ದ ಅಪ್ಪಟ ಹಳ್ಳಿ ಮನಸ್ಸಿನ ನನಗೆ ಅವತ್ತು ಕರುಳು ಕಿವುಚಿದಂತಾಗಿತ್ತು. ಆತನ ಹತ್ತಿರ ಹೋಗಿ ಸಮಾಧಾನ ಹೇಳಿ ಒಂದು ನೂರು ರೂಪಾಯಿ ನೋಟನ್ನು ಆತನ ಕೈಯಲ್ಲಿ ಹಿಡಿಸಿದೆ. ಆದರೆ ಆತ ನಾನು ಕಲ್ಲಂಗಡಿ ಕೊಳ್ಳಲು ಹಣ ಕೊಟ್ಟೆನೆಂದು ಭಾವಿಸಿ ಚಿಲ್ಲರೆ ಇಲ್ಲವೆಂದು ಹೇಳಿದ. ನಾನು "ಹಣ ಇಟ್ಟುಕೋ, ನನಗೇನೂ ಹಣ್ಣು ಬೇಡ" ಎಂದೆ. ಆದರೆ ಆತ ಪುಕ್ಕಟೆ ಹಣ ತೆಗೆದುಕೊಳ್ಳಲು ನಿರಾಕರಿಸಿ, ಎಷ್ಟು ಹೇಳಿದರೂ ಕೇಳದೇ ನನ್ನ ಕೈಯಲ್ಲಿ ಒಂದು ಕಲ್ಲಂಗಡಿ ಹಿಡಿಸಿದ ! ಪುಕ್ಕಟೆ ಬರುವ ಹಣ ಯಾವತ್ತೂ ಒಳ್ಳೇದು ಮಾಡೋದಿಲ್ಲವೆಂದು ಹೇಳಿದ. ಆಮೇಲೆ ಅವನಿಗಾದ ನಷ್ಟವನ್ನು ಮನವರಿಕೆ ಮಾಡಿ, ಆ ಒಳ್ಳೆಯ ಹಣ್ಣನ್ನು ಅವನಿಗೇ ಕೊಟ್ಟು, ಅವನ ಸಮಾಧಾನಕ್ಕೆ ಚೂರಾಗಿದ್ದ ಹಣ್ಣಿನ ಒಂದು ಪೀಸನ್ನು ತಿಂದು ಮನೆಯತ್ತ ಹೊರಟೆ.
ಮನೆಯಲ್ಲಿ ಪ್ರಶ್ನೆಗಳದ್ದೇ ಚಾದರ ಹೊದ್ದು ಮಲಗಿದವನಿಗೆ ಆತನ ಮುಖವೇ ಕಣ್ಣ ಮುಂದೆ ಬಂದಂತಾಗುತ್ತಿತ್ತು. ಬೇಕಾದಷ್ಟು ಹಣ ಇದ್ದರೂ ಕಂಡವರ ಎಂಜಲು ನೆಕ್ಕುವ ರಾಜಕಾರಣಿಗಳು, ಪೋಲೀಸು ಪೇದೆಗಳಿಂದ ಹಫ್ತಾ ವಸೂಲಿ ಮಾಡುವ ದರ್ಪದ ಅಧಿಕಾರಿಗಳ ನಡುವೆ ಆ ಬಡತನದ ಮಧ್ಯೆಯೂ ಪ್ರಾಮಾಣಿಕವಾಗಿ ಬದುಕುವ, ಪುಕ್ಕಟೆ ಹಣಕ್ಕೆ ಆಸೆ ಪಡದ ಆತ ನನಗೆ ನಿಜವಾದ ಪ್ರಾಮಾಣಿಕನಾಗಿ ಕಂಡ ! ಪ್ರಾಯಶಃ ಬಡತನ ಹಾಗೂ ಅನಕ್ಷರತೆಯೇ ಹೆಚ್ಚು ಪ್ರಾಮಾಣಿಕರನ್ನು ಹುಟ್ಟಿಸುತ್ತವೆ ಅನಿಸಿತು. ಮನುಷ್ಯ ಬುದ್ಧಿವಂತನಾದಷ್ಟೂ ಆಸೆಬುರುಕತನ ಜಾಸ್ತಿಯೇನೋ...
ಹಣವಿಲ್ಲದೆ ಒಂದು ದಿನವೂ ಕಳೆಯಲು ಕಷ್ಟವೆನಿಸುವ ಬೆಂಗಳೂರಿನಂಥ ಮಹಾನಗರಿಯಲ್ಲಿ ಇಂಥ ಅಪ್ಪಟ ಪ್ರಾಮಾಣಿಕರನ್ನು ನೋಡಿದಾಗ ಹೆಮ್ಮೆ ಎನಿಸುತ್ತದೆ.ನಮ್ಮನ್ನೇ ಹುಡುಕಿಕೊಂಡು ಬಂದು ಚಿಲ್ಲರೆ ಕೊಟ್ಟು ಹೋಗುವ ಬಸ್ ಕಂಡಕ್ಟರ್ ಗಳು, ಜವಾಬ್ದಾರಿ ಇಲ್ಲದೆ ಆಟೋ ರಿಕ್ಷಾಗಳಲ್ಲೇ ಬಿಟ್ಟು ಬಂದ ವಸ್ತುಗಳನ್ನು ನಿಯತ್ತಾಗಿ ಹಿಂದಿರುಗಿಸುವ ಆಟೋ ಡ್ರೈವರ್ ಗಳು - ನಿಮ್ಮನ್ನೆಲ್ಲ ನೋಡಿದಾಗ ಪ್ರಾಮಾಣಿಕತೆಗೇ ಹೆಸರಾದ ಕನ್ನಡ ಮಣ್ಣಿನಲ್ಲಿ ಹುಟ್ಟಿದ್ದು ಸಾರ್ಥಕವೆನಿಸುತ್ತದೆ. ಹಣದ ಹಿಂದೆ ನುಗ್ಗುತ್ತಾ ಮಾನವೀಯ ಮೌಲ್ಯಗಳನ್ನು ಮರೆತು ಸಾಗುತ್ತಿರುವ ಈವತ್ತಿನ ಪ್ರಪಂಚದಲ್ಲಿ ಪ್ರಾಮಾಣಿಕತೆಯ ಸೋಗಿನಲ್ಲಿ ಬದುಕುತ್ತಿರುವ ನಮ್ಮ ಮಧ್ಯೆ ನೀವು ನಿಜಕ್ಕೂ ಮಾದರಿ. ಹ್ಯಾಟ್ಸ್ ಆಫ್ ಟು ಯು !
ಅಂದ ಹಾಗೆ ಭಾರತದ ಯಾವ ನಗರದಲ್ಲಿ ಪ್ರಾಮಾಣಿಕರು ಹೆಚ್ಚು ಎಂದು ನೋಡಲು ಒಂದು ಸಮೀಕ್ಷೆ ನಡೆಸಲಾಗಿತ್ತು. ಒಂದಿಷ್ಟು ಹಣ ತುಂಬಿದ ಪರ್ಸಿನಲ್ಲಿ ವಿಳಾಸ ಇರುವ ವಿಸಿಟಿಂಗ್ ಕಾರ್ಡನ್ನು ಇಟ್ಟು ವಿವಿಧ ನಗರಗಳಲ್ಲಿ ಬೇರೆ ಬೇರೆ ಜನನಿಬಿಡ ಸ್ಥಳಗಳಲ್ಲಿ ಎಸೆಯಲಾಯಿತಂತೆ. ಬೆಂಗಳೂರಿನಲ್ಲಿ ಹತ್ತರಲ್ಲಿ ಏಳು ಪರ್ಸುಗಳು ಸರಿಯಾದ ವಿಳಾಸಕ್ಕೆ ಮರುದಿನ ತಲುಪಿದ್ದು ಹಣದಲ್ಲೂ ವ್ಯತ್ಯಾಸವಾಗದೇ ಇದ್ದುದು ಕನ್ನಡ ನೆಲದಲ್ಲಿ ಇನ್ನೂ ಪ್ರಾಮಾಣಿಕರು ಇದ್ದಾರೆ ಅನ್ನೋದಕ್ಕೆ ಸಾಕ್ಷಿ ! ನಮ್ಮಲ್ಲಿರೋ ಪ್ರಾಮಾಣಿಕತೆಯೂ ಈ ಘಟನೆಯೊಂದಿಗೆ ಜಾಗೃತವಾಗಲಿ ಅನ್ನೋ ಆಶಯ...